ಅಬುಲ್ ಫಜಲ್:-
	(1551-1602): ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರಲ್ಲಿ ಪ್ರಸಿದ್ಧ. ಪಾರ್ಸಿ ಭಾಷಾಪಾರಂಗತ. ಶೇಖ್ ಮುಬಾರಕನೆಂಬ ಸೂಫಿ ತತ್ತ್ವಜ್ಞಾನ ಮಗ. ಇವನ ಅಣ್ಣ ಅಬುಲ್ ಫೈಜಿ. ಇವರು ಅಕ್ಬರನ ಆಪ್ತ ಗೆಳೆಯರಾಗಿದ್ದು ಆತನಿಗೆ ಸಾಹಿತ್ಯ ಸಂಸ್ಕøತಿಗಳ ವಿಕಾಸಕಾರ್ಯದಲ್ಲಿ ಸಂಪೂರ್ಣ ಸಹಾಯಕರಾಗಿದ್ದರು. ಇವರಲ್ಲಿ ಅಬುಲ್ ಫಜಲ್ ಅಕ್ಬರನ ಬಲಗೈಯಾಗಿದ್ದ. ಈತ ಪಾರಸಿ ಭಾಷೆಯಲ್ಲಿ ಐನಿ ಇ ಅಕ್ಬರಿ, ಅಕ್ಬರನಾಮ(7 ವರ್ಷಗಳಲ್ಲಿ ಪೂರ್ಣಗೊಳಿಸಿದ), ಮೊದಲಾದ ಶ್ರೇಷ್ಠ ಗ್ರಂಥಗಳನ್ನು ರಚಿಸಿ ಪಂಡಿತರ ಮೆಚ್ಚುಗೆಗೆ ಪಾತ್ರನಾಗಿದ್ದ. ಈತ ಕವಿಯೂ ನಿಬಂಧಕಾರನೂ ವಿಮರ್ಶಕನೂ ಇತಿಹಾಸತಜ್ಞನೂ ಆಗಿದ್ದ. ಸೂಫಿ ತತ್ತ್ವದಲ್ಲಿ ಆಸಕ್ತನಾಗಿದ್ದರಿಂದ ಸತ್ಯಾನ್ವೇಷಿಯೂ ಸತ್ಯಸಂಧನೂ ಆಗಿದ್ದ. ಈತನ ಬರೆಹಗಳು ಸಹಜ, ಸುಂದರ, ನೈಜ. ಅಕ್ಬರನ ಖಡ್ಗಕ್ಕೆ ನಾನು ಅಂಜುವುದಿಲ್ಲ. ಆದರೆ ಅಬುಲ್ ಫಜಲ್‍ನ ಲೇಖನಿಗೆ ಮಾತ್ರ ಅಂಜುತ್ತೇನೆ ಎಂಬುದಾಗಿ ವಿದ್ವಾಂಸ ಅಬ್ದುಲ್ಲಾ ಉಜ್‍ಬೇಗ್‍ನ ಉದ್ಗಾರ ಒಪ್ಪತಕ್ಕದ್ದಾಗಿದೆ.

	"ದೀನ್ ಇ ಇಲಾಹಿ " ಹೊಸ ಮತ ಸ್ಥಾಪನಾಕಾರ್ಯದಲ್ಲಿ ಅಬುಲ್ ಫಜಲ್ ಅಕ್ಬರನಿಗೆ ನೆರವಾದ. ಆ ನೂತನ ಧರ್ಮದ ಪ್ರಸಾರ ಕಾರ್ಯವನ್ನು ಕೈಗೊಂಡ. ಅಕ್ಬರನ ಆಪ್ತಗೆಳೆಯನಾಗಿದ್ದ. ಈತನನ್ನು ರಾಜಪುತ್ರ ಸಲೀಮ ಕೊಲ್ಲಿಸಿದ್ದು (1602) ಅಕ್ಬರನಿಗೆ ವಜ್ರಾಘಾತವಾಯಿತು. "ಸಲೀಮ ಚಕ್ರವರ್ತಿಯಾಗಲು ಇಚ್ಛಿಸಿದ್ದರೆ, ಆತ ನನ್ನನ್ನೇ ಕೊಂದು ಅಬುಲ್ ಫಜಲನನ್ನು ಉಳಿಸಬಹುದಾಗಿತ್ತು!" ಎಂದು ಅಕ್ಬರ್ ನೊಂದುಕೊಳ್ಳುವಂತಾಯಿತು.  	(ನೋಡಿ- ಅಕ್ಬರ್)
(ಎಸ್.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ